ಅಧಿಕಾರ ಪ್ರತಿನಿಯೋಗ

ಅಧಿಕಾರವನ್ನು ಕೇಂದ್ರ ಸರ್ಕಾರದಿಂದ ಸ್ಥಳೀಯ ಸರ್ಕಾರಕ್ಕಾಗಲೀ ಸರ್ಕಾರದ ಒಂದು ಶಾಖೆಯಿಂದ ಮತ್ತೊಂದು ಶಾಖೆಗಾಗಲೀ ನಿರ್ದಿಷ್ಟ ನಿಯೋಗಕ್ಕಾಗಲೀ ವರ್ಗಾಯಿಸುವುದು (ಡೆಲಿಗೇಷನ್ ಆಫ್ ಪವರ್). ಅಧಿಕಾರವನ್ನು ಪಾರ್ಲಿಮೆಂಟಿನಿಂದ ಅಥವಾ (ಅಮೆರಿಕದಲ್ಲಾದರೆ ಶಾಸನಸಭೆ), ಮಂತ್ರಿಮಂಡಲದ ಸದಸ್ಯರಿಗೆ ಅಥವಾ ಪ್ರಜಾಪ್ರಭುತ್ವದ ರಾಷ್ಟ್ರಗಳಲ್ಲಿನ ಚುನಾಯಿತ, ನಿಯೋಜಿತ ರಾಷ್ಟ್ರಾಧ್ಯಕ್ಷನಿಗೆ, ಕಾರ್ಯಶಾಖೆಗೆ, ಇಲ್ಲದೆ ಅಧಿಕಾರಿಗಳಿಗೆ ಅಥವಾ ಶಾಸನಾನುಸಾರವಾಗಿ ಅಧಿಕಾರವಿರುವ ಆಡಳಿತಗಾರನಿಗೆ ಇಲ್ಲವೆ ಸ್ವತಂತ್ರವಾದ ಕಾನೂನುಬದ್ಧವಾದ ಒಂದು ಮಂಡಳಿಗೆ ನಿರೂಪದ ಮೂಲಕ ವರ್ಗಾಯಿಸಿದಾಗ ಅಧಿಕಾರ ಪ್ರತಿನಿಯೋಗವಾಯಿತೆನ್ನಬಹುದು.
	
ಹೆಚ್ಚುಹೆಚ್ಚಾಗಿ ಅಧಿಕಾರವನ್ನು ಮತ್ತೊಂದು ನಿಯೋಗಕ್ಕೆ ಅಥವಾ ನಿಯೋಗಿಗೆ ವಹಿಸಿಕೊಡಬೇಕೆಂಬುದೇ ಈಗಿನ ಪಾರ್ಲಿಮೆಂಟ್, ಕಾಂಗ್ರೆಸ್ ಮತ್ತು ಶಾಸನಸಭೆಗಳ ಉದ್ದೇಶವಾಗಿದೆ. ಸರ್ಕಾರಿ ಆಡಳಿತದಲ್ಲಿ ಅಧಿಕಾರ ಪ್ರತಿನಿಯೋಗದ ಅವಶ್ಯಕತೆ ಇದ್ದೇ ಇದೆ. ಶಾಸನಸಭೆಯ ಕೆಲಸಕಾರ್ಯಗಳು ತುಂಬ ಹೆಚ್ಚಿವೆ; ಕಾನೂನಿನ ಶಾಸ್ತ್ರ ತಂತ್ರಗಳೂ ಹೆಚ್ಚಿವೆ. ಸದಸ್ಯರಿಗೆ ಕಾನೂನುಗಳನ್ನು ವಿಶದವಾಗಿ ಪರಿಶೀಲಿಸುವಷ್ಟು ಅವಕಾಶವೂ ಇರುವುದಿಲ್ಲ. ಅಲ್ಲದೆ ಅಧಿಕಾರ ಪ್ರತಿನಿಯೋಗವಿಲ್ಲದಿದ್ದರೆ ಸರ್ಕಾರಿ ಇಲಾಖೆಗಳ ಮುಖ್ಯಸ್ಥರಿಗೂ ಕೆಲಸಮಾಡಲು ಕಷ್ಟವಾಗುತ್ತದೆ. ಪ್ರತಿನಿಯೋಗ ಶಾಸನಬದ್ಧವಾಗಿ ಕಾನೂನಿಗೊಳಪಟ್ಟು ನಡೆದಿರಬೇಕು. ಹಾಗಾಗದಿದ್ದಲ್ಲಿ ತೊಡಕುಂಟಾಗುತ್ತದೆ. ಉದಾಹರಣೆಗೆ, ಅಮೆರಿಕದಲ್ಲಿ ಅಮೆರಿಕದ ಪರಮಾಧಿಕಾರ ನ್ಯಾಯಸ್ಥಾನ (ಸುಪ್ರೀಂಕೋರ್ಟ್) ಎರಡು ಮಹತ್ತ್ವದ ಮೊಕದ್ದಮೆಗಳಲ್ಲಿ (1935) ನ್ಯಾಷನಲ್ ಇಂಡಿಸ್ಟ್ರಿಯಲ್ ರಿಕವರಿ ಆಕ್ಟನ್ನು (1933) ಹೊಡೆದುಹಾಕಿ ತೀರ್ಪುಕೊಟ್ಟಿತು. ಅಮೆರಿಕದ ಕಾಂಗ್ರೆಸ್ಸಿಗೆ ಶಾಸನಸಭೆಯ ಅಧಿಕಾರವನ್ನು ಅಮೆರಿಕದ ರಾಷ್ಟ್ರಾಧ್ಯಕ್ಷನಿಗಾಗಲಿ ಕಾರ್ಯಶಾಖೆಯ ನಿಯೋಗಕ್ಕಾಗಲಿ ಶಾಸನಬದ್ಧವಾಗಿ ವರ್ಗಾಯಿಸುವುದಕ್ಕೆ, ವಹಿಸಿಕೊಡುವುದಕ್ಕೆ ಅಧಿಕಾರವಿಲ್ಲವೆಂದು ಅದು ಹೇಳಿತು. ಮತ್ತೊಂದು ಮೊಕದ್ದಮೆಯಲ್ಲಿ ಅದೇ ಸುಪ್ರೀಂಕೋರ್ಟು ಕಾಂಗ್ರೆಸ್ ದೇಶೀಯ ಸರ್ಕಾರಗಳಿಗೆ ವ್ಯವಸ್ಥಾಬದ್ಧವಾದ ಅಧಿಕಾರವನ್ನು ವಹಿಸಿಕೊಡಕೂಡದೆಂದು ತೀರ್ಪುಕೊಟ್ಟಿತು. ಅಮೆರಿಕದ ಕಾಂಗ್ರೆಸ್ ದೊಡ್ಡ ಪ್ರಮಾಣದಲ್ಲಿ ನಿಯೋಜಿತ ಅಧಿಕಾರವನ್ನು ವಿದೇಶಿ ವ್ಯವಹಾರಮಾಡಲು ಅನುಕೂಲವಾಗುವಂತೆ ರಾಷ್ಟ್ರಾಧ್ಯಕ್ಷರಿಗೆ ವಹಿಸಿಕೊಟ್ಟಾಗ ಸುಪ್ರೀಂಕೋರ್ಟು ಅದನ್ನು ಎತ್ತಿಹಿಡಿಯಿತು.
	
ನಿಯೋಜಿತ ಅಧಿಕಾರ ವಹಿಸಿಕೊಟ್ಟದ್ದು ನ್ಯಾಯದೃಷ್ಟಿಯಲ್ಲಿ ಸರಿಯೆಂದು ಎಣಿಸಬೇಕಾದರೆ, ಅಮೆರಿಕದ ಕಾಂಗ್ರೆಸ್ ಮೊದಲು ಸರ್ಕಾರ ಯಾವ ಕಾರ್ಯನೀತಿ ಅನುಸರಿಸಬೇಕೆಂಬುದನ್ನು ನಿರ್ಧರಿಸಬೇಕು ಮತ್ತು ದಾರಿ ತೋರಿ ನಡೆಸುವ ತತ್ತ್ವ ಅಥವಾ ಪ್ರಮಾಣವನ್ನು ನಿಷ್ಕøಷ್ಟವಾಗಿ ತಿಳಿಯಪಡಿಸಬೇಕು ಎಂಬ ಸಾಮಾನ್ಯ ನಿಯಮವನ್ನು ಅಮೆರಿಕದ ಸುಪ್ರೀಂಕೋರ್ಟು ಹೇಳಿದೆ.
	
ಅಧಿಕಾರಪ್ರತಿಯೋಗ ಸ್ವಲ್ಪವಾಗಿರಬಹುದು; ಷರತ್ತುಗಳೊಂದಿಗೆ ಅಥವಾ ಯಾವ ಷರತ್ತೂ ಇಲ್ಲದೆ ವಿಧಿವಿಹಿತವಾಗಿ ಅಥವಾ ಯಾವವಿಧಿಯೂ ಇಲ್ಲದೆ ಮಾಡಿದ್ದಾಗಿರಬಹುದು. ನೇರವಾಗಿ ಆಗಲಿ ನೇರವಾದ ಸಂಬಂಧವಿಲ್ಲದೆ ಮತ್ತೊಬ್ಬರ ಅಥವಾ ಮತ್ತೊಂದರ ಮೂಲಕ ಮಾಡಿದ್ದಾಗಿರಬಹುದು. ಯಾವ ಆಡಳಿತವನ್ನು ತೆಗೆದುಕೊಂಡು ನೋಡಿದರೂ ಇದರ ಅವಶ್ಯಕತೆ ಇದ್ದೇ ಇದೆ. ಆದರೆ ಇದಕ್ಕೆ ಒಂದು ಪರಿಮಿತಿ ಇದೆ. ಮಿತಿಯಿಲ್ಲದೆ ಮಾಡುವಹಾಗಿಲ್ಲ. ಈ ಪರಿಮಿತಿ ಇದ್ದರೆ ಮಾತ್ರ ಇಲಾಖೆಗಳ ಮುಖ್ಯಾಧಿಕಾರಿಗಳಿಗೆ ಸಿಬ್ಬಂದಿಯ ಮೇಲೆ ಹತೋಟಿ ಇಟ್ಟುಕೊಂಡು ಕಾರ್ಯನಿರ್ವಹಣೆಮಾಡಲು ಸಾಧ್ಯ.		 

(ಕೆ.ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ